Saturday, February 26, 2011

ಗೋಸಾಯಿ ಘಾಟ್ ಪ್ರವಾಸ



   ಹೀಗೆ ಕೆಲವು ದಿನಗಳ ಹಿಂದೆ ಸ್ನೇಹಿತರೊಬ್ಬರು ಫೋನ್ ಮಾಡಿ, ಈ ಭಾನುವಾರ ಗೋಸಾಯಿ ಘಾಟ್ಗೆ ಹೋಗೋಣ ಎಂದರು. ನಾನು ಸಹ ಅದೆಲ್ಲಿದೆ ಏನು ವಿಶೇಷ ಯಾವುದೂ ಅರಿಯದೆ ಸರಿ ಎಂದಿದ್ದೆ, ಅನಂತರ ತಿಳಿಯಿತು ನಾವು ಭಾನುವಾರ ಬೆಳಗ್ಗಿನ ಜಾವವೇ ಹೊರಡಬೇಕೆಂದು. ಹೇಗೋ ಮಾಡಿ ಐದಕ್ಕೆ ಎದ್ದು ಕುಳಿತರೆ, ಸ್ನೇಹಿತರ ವಾಹನ ಬಂದದ್ದು ೮ಕ್ಕೆ, ಆಶ್ಚರ್ಯವೆಂದರೆ 8-10 ಜನ ಹೋಗುವುದೆಂದು ನಾನು ತಿಳಿದಿದ್ದೆ ಆದರೆ ಅಲ್ಲಿದ್ದದು 40 ಕ್ಕೂ ಹೆಚ್ಚು ಜನ.
ಗೋಸಾಯಿ ಘಾಟ್ ಕಾವೇರಿ ತೀರ
  
ಸುಂದರವಾದ ಬಸ್ಸು, ಆದರೆ ಕಡೆಯಲ್ಲಿ ಹತ್ತಿದ ಕಾರಣ ನನಗೆ ದೊರೆತದ್ದು ಕಡೆಯ ಸೀಟು. ನಾನು ನನ್ನ ಸ್ನೇಹಿತ ಇಬ್ಬರೂ, ತಿಳಿದಿದ್ದ ಇನ್ನೊಬ್ಬರೊಂದಿಗೆ ಅಲ್ಲೇ ಕುಳಿತೆವು. ಬಸ್ಸು ಕೆಂಗೇರಿಯನ್ನುದಾಟಿ ಬೆಂಗಳೂರಿನ ಗಲಬೆಯ ಟ್ರಾಫಿಕ್ ಗೆ ವಿದಾಯ ಹೇಳಿತು. ಅಷ್ಟರಲ್ಲಿ ಬಸ್ಸಿನಲ್ಲಿದ್ದ ಕೆಲವರ ಪರಿಚಯವಾಯಿತು, ನೋಡ ನೋಡುತ್ತಿದಂತೆ ಅಲ್ಲಿದ್ದ ಹಿರಿಯರೊಬ್ಬರು ತಮ್ಮ ಪರಿಚಯ ಮಾಡಿಕೊಳ್ಳುತ್ತ, ಇತರರೂ ತಮ್ಮ ಪರಿಚಯ ಮಾಡಿಕೊಡಬೇಕೆಂದು ವಿನಂತಿಸಿದರು, ಅದರೊಂದಿಗೆ ವಿಪ್ರಚೇತನದ ಪರಿಚಯವನ್ನೂ ಮಾಡಿಕೊಟ್ಟರು. 
ಕಾಶಿ ವಿಶ್ವೇಶ್ವರ ದೇವಾಲಯ 
ಹೀಗೆ 7 ವರ್ಷದ ಹಿಂದೆ ರಘುಕುಮಾರ್ ಎಂಬುವವರ ಕನಸಿನ ಕೂಸು ವಿಪ್ರ ಚೇತನ. ಬ್ರಾಹ್ಮಣ ಸಮಾಜದಲ್ಲಿ ಒಗ್ಗಟ್ಟು ಮೂಡಿಸುವುದು, ವೃದ್ದಾಶ್ರಮ, ಅನಾಥಾಲಯ ಇವುಗಳಿಗೆ ಸಹಾಯ ಮಾಡುವುದು, ಉಚಿತ ಸಾಮೂಹಿಕ ವಿವಾಹ ಉಪನಯನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು ವಿಪ್ರ ಚೇತನದ ಕೆಲವು ಕಾರ್ಯಕ್ರಮಗಳಾಗಿವೆ. ಈ ರೀತಿ ಈಗಾಗಲೇ ಹಲವಾರು ಸಂಘ ಸಂಸ್ತೆಗಳಿದ್ದರೂ ದುರಾಸೆ ಮತ್ತು ರಾಜಕೀಯ ಬೇದಗಳಿಂದ ಸಮಾಜಕ್ಕೆ ಸಾಕಷ್ಟು ಉಪಕಾರಿಯಾಗಿಲ್ಲ. ವಿಪ್ರ ಚೇತನ ಆ ನಿಟ್ಟಿನಲ್ಲಿ ವಿಬಿನ್ನವಾಗಿದ್ದು, ಇಲ್ಲಿ ಎಲ್ಲರೂ ಅದ್ಯಕ್ಷರೆ ಎಲ್ಲರೂ ಸ್ವಯಂಸೇವಕರೆ. ವ್ಯಾಪರ ಚೇತನ ವಿಪ್ರ ಚೇತನದ ಅಂಗವಾಗಿದ್ದು ವಿವಿದೊದ್ಯೋಗಿಗಳ ಪರಿಚಯ ಸ್ಥಾನವಾಗಿದೆ. ಗೋಸಾಯಿ ಘಾಟ್ ಪ್ರವಾಸ, ಮಾಘ ಸ್ನಾನ ಮತ್ತು ನದೀ ತೀರದಲ್ಲಿ ಸತ್ಯನಾರಾಯಣ ಪೂಜೆ ಸತತವಾಗಿ ನಡೆಯುತ್ತಿರುವುದು ಇದು ಎರಡನೇ ವರ್ಷ. ವಿಪ್ರ ಚೇತನದ ಕೆಲಸ ಹೀಗೆಯೇ ಮುಂದುವರೆಯಲೆಂದು ಆಶಿಸುತ್ತ ನಮ್ಮ ಪ್ರವಾಸ ಕಥನದಲ್ಲಿ ಮುಂದುವರೆಯೋಣ.
ಭತ್ತದ ಗದ್ದೆ 
ಗೋಸಾಯಿ ಘಾಟ್ ಎಂಬುದು ಶ್ರೀರಂಗಪಟ್ಟಣದ ಹತ್ತಿರದಲ್ಲಿರುವ ಒಂದು ಯಾತ್ರಾ ಸ್ಥಳ. ಬೆಂಗಳೂರಿನಿಂದ 120-125 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರ ಕಾವೇರಿ ನದಿಯ ತೀರವಾಗಿದ್ದು, ಸಂಗಮದಿಂದ ಉತ್ತರ ದಿಕ್ಕಿಗಿದೆ. ಕಾಶಿ ವಿಶ್ವೇಶ್ವರ ಸ್ವಾಮಿಯು ಇಲ್ಲಿನ ಕ್ಷೇತ್ರ ದೇವತೆ, ಯಾತ್ರಾರ್ಥಿಗಳು ಕಾವೇರಿಯಲ್ಲಿ ಮಿಂದು ಹೋಗುವುದಕ್ಕೆ ಇಲ್ಲಿಗೆ ಬರುತ್ತಾರೆ. ಮೈಸೂರು ರಸ್ತೆಯಿಂದ ಶ್ರೀರಂಗಪಟ್ಟಣದ ಹತ್ತಿರ ಎಡಕ್ಕೆ ತಿರುಗಿದರೆ ರಸ್ತೆಯ ಇಕ್ಕೆಲಗಳಲ್ಲಿ ಕಬ್ಬು ಭತ್ತದ ತೆನೆಗಳ ಮೋಹಕ ದೃಶ್ಯದೊಂದಿಗೆ ಹಳೆಯ ಪಾಳುಬಿದ್ದ ಮಂಟಪಗಳು ನಮಗೆ ಗೋಸಾಯಿ ಘಾಟ್ ನ ದಾರಿ ತೋರಿಸುತ್ತದೆ.
ರಮಣೀಯ ಕಾವೇರಿ 

ನಾವೆಲ್ಲರೂ ಸ್ವಪರಿಚಯ ಮಾಡಿಕೊಟ್ಟನಂತರ ನಮ್ಮಲ್ಲಿದ್ದ ಓರ್ವರು ಸಮಯ ಕಳೆಯುವುದಕ್ಕಾಗಿ ಅಂತ್ಯಾಕ್ಷರೀ ಆಡೋಣ ಎಂದರು. ಕೂಡಲೇ ಎರಡು ಗುಂಪಾದ ಬಸ್ಸು ಅಂತ್ಯಾಕ್ಷರಿಯಲ್ಲಿ ಮುಳುಗಿ ಎಚ್ಚರವಾದದ್ದೇ ಗೋಸಾಯಿ ಘಾಟ್ ನಲ್ಲಿ. ಅಷ್ಟರಲ್ಲಾಗಲೇ ಸುಮಾರು 11 ಘಂಟೆಯಾದ್ದರಿಂದ ಯಾರಲ್ಲಿಯೂ ಮಿಂದು ಆಟವಾಡಿ ತದನಂತರ ತಿನ್ನುವ ತಾಳ್ಮೆಯಿಲ್ಲದೆ ಎಲ್ಲರೂ ಉಪ್ಪಿಟ್ಟು ಕೆಸರಿಬಾತುಗಳನ್ನು ಹೊಟ್ಟೆಗೆ ಏರಿಸಿದೆವು. ಅಲ್ಲಿಯವರೆಗೆ ಅಷ್ಟಾಗಿ ಪರಿಚಯವಾಗದಿದ್ದ ಅನೇಕರು ತಿನ್ನುವಾಗ ಪರಿಚಯವಾದರು.

ನದೀ ತೀರದಲ್ಲಿ ಮಂಟಪ 

ಅನಂತರ ಧೀಕ್ಷಿತರು ಪೂಜೆಗೆ ಅಣಿಮಾಡಲು ಸಿದ್ದರಾದರು, ನಾವೆಲ್ಲರೂ ನದಿಗೆ ಹಾರಿದೆವು. ಬಹಳ ದಿನಗಳಿಂದ ಮಳೆ ಇಲ್ಲದ ಕಾರಣ ಅಷ್ಟಾಗಿ ನೀರಿರಲಿಲ್ಲ ಮತ್ತು ಕಲ್ಲೋ ಕಲ್ಲು. ಸೊಂಟದವರೆಗೆ ನೀರಿದ್ದ ಜಾಗದಲ್ಲಿ ಹೋಗಿ ಸ್ವಲ್ಪ ಹೊತ್ತು ಮಿಂದು ಆಟವಾಡಿ ಅನಂತರ ಪೂಜೆಯಾಗುತ್ತಿದ್ದ ಪ್ರಾಕರದೊಳಗೆ ಬಂದು ಕುಳಿತೆವು. ಅಷ್ಟರಲ್ಲಿ ಆಗಲೇ ನಮ್ಮ ಹಿರಿಯರೆಲ್ಲರೂ ಮನತ್ರಘೋಶದಿಂದ ಪೂಜೆಯನ್ನು ಪ್ರಾರಂಬಿಸಿ ಬಿಟ್ಟಿದ್ದರು. ನಾನು ಕ್ಯಾಮೆರಾವನ್ನು ಅತ್ತಿತ್ತ ಕ್ಲಿಕ್ಕಿಸುತ್ತ ಪೂಜೆಯ ಮತ್ತು ನಿಸರ್ಗದ ಚಿತ್ರಗಳನ್ನು ಸೆರೆ ಹಿಡಿದೆ. ಸರಿ ಸುಮಾರು 3 ಘಂಟೆಯ ವೇಳೆಗೆ ಕಾಸಿ ವಿಶ್ವೇಶ್ವರನ ಸಮೇತ ಸತ್ಯನಾರಾಯಣ ವ್ರತವು ಸಂಪೂರ್ಣವಾಯಿತು. ಅದುವರೆವಿಗೂ ಮನೆ ಅಥವಾ  ದೇವಾಲಯಗಳಲ್ಲಿ ಸತ್ಯನಾರಾಯಣ ಪೂಜೆಯನ್ನು ನೋಡಿದ್ದ ನನಗೆ ಇದೊಂದು ಹೊಸ ಅನುಭವವಾಗಿತ್ತು. 
ಕಾಶಿ ವಿಶ್ವೇಶ್ವರನೊಂದಿಗೆ ಸತ್ಯನಾರಾಯಣ ಪೂಜೆ 
ಪ್ರಸಾದವನ್ನು ಸ್ವೀಕರಿಸಿದ ನಂತರ ಬಿಸಿ ಬೇಳೆ ಬಾತನ್ನು ನದೀ ತೀರದಲ್ಲಿ ಆಸ್ವಾದಿಸುತ್ತಾ ಕುಳಿತೆವು. ಪಕ್ಕದಲ್ಲೇ ಇದ್ದ ಕಬ್ಬು ಭತ್ತದ ಗದ್ದೆಗಳ ಭೇಟಿ ನೀಡಿ ಕ್ಷೇತ್ರಕ್ಕೆ ವಿಧಾಯ ಹೇಳಿದೆವು. ಅಲ್ಲಿಂದ ಮನೆಗೆ ಬರುವ ದಾರಿಯಲ್ಲಿ ಹಲವರು ನಿದ್ರಿಸಿದರೆ ಉಳಿದವರನ್ನು ಜೋಷಿಯವರ ಮತ್ತು ಶ್ರೀಕಾಂತರ ಗಾಯನ ರಂಜಿಸುತ್ತಿತ್ತು. ಕೊನೆಗೂ ಸುಂದರವಾದ ಪ್ರವಾಸ ಮುಗಿದೇ ಹೋಯಿತು. 
ಆಕಸ್ಮಿಕವಾಗಿ ದೊರೆತ ಪಕ್ಷಿ
ನಿಮ್ಮ ಮಿತ್ರ 

No comments: